ಕೋರಿ ದಂಪತಿಗಳು    

ಕಾರ್ಲ್ ಫರ್ಡಿನಾಂಡ್ ಕೋರಿ ಮತ್ತು ಆತನ ಪತ್ನಿ ಗರ್ಟಿ ತೆರೇಸ ರ್ಯಾಡ್ನಿಟ್ಸ್ ಕೋರಿ.  ಜೀವರಸಾಯನ ವಿಜ್ಞಾನ ಪರಿಣತರು.  ಇವರಿಗೆ 1947ರಲ್ಲಿ ಶರೀರಶಾಸ್ತ್ರ ಮತ್ತು ವೈದ್ಯಶಾಸ್ತ್ರಗಳ ನೊಬೆಲ್ ಪಾರಿತೋಷಿಕ ದೊರೆಯಿತು.  ಇವರಿಬ್ಬರೂ ಪ್ರಾಗ್ ನಗರದಲ್ಲಿ (ಈಗಿನ ಜೆಕೊಸ್ಲೊವಾಕಿಯ) 1896ರಲ್ಲಿ ಜನಿಸಿದರು.  1920ರಲ್ಲಿ ಅಲ್ಲಿಯ ಜರ್ಮನ್ ವಿಶ್ವವಿದ್ಯಾಲಯದ ಎಂ.ಡಿ. ಪದವಿ ಗಳಿಸಿದರು.  ಕೆಲವು ವರ್ಷಗಳು ವಿಯೆನ್ನದ ವೈದ್ಯ ಮಂದಿರದಲ್ಲಿ ಕೆಲಸ ಮಾಡಿ ಅನಂತರ 1922ರಲ್ಲಿ ಅಮೆರಿಕೆಗೆ ಹೋಗಿ ನೆಲೆಸಿದರು.  ಸೇಂಟ್ ಲೂಯಿಸ್ ಪಟ್ಟಣದ ವಾಷಿಂಗ್‍ಟನ್ ವಿಶ್ವವಿದ್ಯಾಲಯದ ವೈದ್ಯಶಾಲೆಯಲ್ಲಿ 1931-1967ರ ವರೆಗೆ ಕಾರ್ಲ್ ಕೋರಿ ಜೀವರಸಾಯನಶಾಸ್ತ್ರ ಮತ್ತು ಫಾರ್ಮಕಾಲಜಿಯ ಪ್ರಾಧ್ಯಾಪಕನಾಗಿದ್ದ.  ಗರ್ಟಿ ಕೋರಿ 1947ರಿಂದ ಅಲ್ಲಿಯೇ ಪ್ರೊಫೆಸರ್ ಆಗಿದ್ದು 1957ರಲ್ಲಿ ಗತಿಸಿದಳು.  ಈ ದಂಪತಿಗಳು ಪ್ರಖ್ಯಾತರಾದದ್ದು ಶರ್ಕರಪಿಷ್ಟಗಳ ಚಯಾಪಚಯಕ್ರಿಯೆ ಮತ್ತು ಹಾರ್ಮೋನುಗಳ ಪ್ರಭಾವ ಇವನ್ನು ಕುರಿತ ಕ್ಷೇತ್ರಗಳಲ್ಲಿ ನಡೆಸಿದ ಸಂಶೋಧನೆಗಳಿಂದ.  ಪ್ರಾಣಿಗಳ ಶರೀರದಲ್ಲಿ ಗ್ಲೂಕೋಸ್ ಏನೇನು ಪರಿವರ್ತನೆ ಹೊಂದುತ್ತದೆಂದು ಅಧ್ಯಯನ ಮಾಡಿ ಮಾಂಸಖಂಡಗಳ ಗ್ಲೈಕೊಜೆನ್ ಹೇಗೆ ವಿಭಜನೆ ಹೊಂದುತ್ತದೆ ಎನ್ನುವುದನ್ನು ಕಂಡುಹಿಡಿದರು.  ಈ ಕ್ರಿಯೆಯ ಮಧ್ಯವರ್ತಿ ಸಂಯುಕ್ತವಾದ ಗ್ಲೂಕೋಸ್-1-ಫಾಸ್ಫೇಟನ್ನು ಗ್ಲೈಕೊಜೆನ್ನಿನ ಫಾಸ್ಪಾರಿಲೈಸಿಸ್ ಕ್ರಿಯೆಯ ಮೂಲಕ ಪ್ರತ್ಯೇಕಿಸಿದರು (1930).  ಈ ಸಂಯುಕ್ತಕ್ಕೆ ಕೋರಿ ಎಸ್ಟರ್ ಎಂದೇ ಹೆಸರು.  ಮಾಂಸಖಂಡಗಳು ಕೆಲಸ ಮಾಡಿದಾಗ ಅವುಗಳ ಗ್ಲೈಕೊಜೆನ್ ಲ್ಯಾಕ್ಟಿಕ್ ಆಮ್ಲವಾಗುತ್ತದೆ.  ಇದು ಆಮ್ಲಜನಕದ ಪ್ರಭಾವಕ್ಕೊಳಗಾಗಿ ಪಿತ್ತಜನಕಾಂಗದಲ್ಲಿ ಗ್ಲೈಕೊಜೆನ್ ರೂಪದಲ್ಲಿ ಸಂಗ್ರಹವಾಗುತ್ತದೆ.  ಅಲ್ಲಿ ಗ್ಲೈಕೊಜೆನ್ ಗ್ಲೂಕೋಸ್ ರೂಪದಲ್ಲಿ ರಕ್ತವನ್ನು ಸೇರಿ ಅಲ್ಲಿಂದ ಮಾಂಸಖಂಡಗಳಲ್ಲಿ ಗ್ಲೈಕೊಜೆನ್ ಆಗಿ ಬದಲಾವಣೆಯಾಗಿ ಕೆಲಸ ಮಾಡುವಾಗ ತಿರುಗಿ ಲ್ಯಾಕ್ಟಿಕ್ ಆಮ್ಲವಾಗುತ್ತದೆ.  ಈ ಚಕ್ರಕ್ಕೆ ಕೋರಿ ಚಕ್ರ ಎಂದು ಹೆಸರು.  ಈ ಕ್ರಿಯೆಗಳಲ್ಲಿ ಭಾಗವಹಿಸುವ ಕೆಲವು ಎನ್‍ಜೈóಮುಗಳನ್ನು ಕೋರಿಗಳು ಸ್ಫಟಿಕೀಕರಿಸಿ ಪ್ರತ್ಯೇಕಿಸಿದರು.  ಶರ್ಕರಪಿಷ್ಟಗಳ ಚಯಾಪಚಯಕ್ರಿಯೆಗಳಲ್ಲಿ ಇನ್ಸುಲಿನ್ ಮತ್ತು ಎಪಿನೆಫ್ರಿನ್‍ಗಳ ಪಾತ್ರವನ್ನು ಅಧ್ಯಯನ ಮಾಡಿದರು.  ಸೇಂಟ್ ಲೂಯಿಸ್ಸಿನ ವಾಷಿಂಗ್‍ಟನ್ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮವಾದ ಜೀವರಸಾಯನಶಾಸ್ತ್ರದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ ಹಿರಿಮೆ ಕೋರಿ ದಂಪತಿಗಳದು.  ಶರ್ಕರಪಿಷ್ಟ ಚಯಾಪಚಯಕ್ರಿಯೆಗಳ ಕ್ಷೇತ್ರದಲ್ಲಿರುವ ಪ್ರಮುಖ ಸಂಶೋಧಕರಲ್ಲಿ ಅನೇಕರು ಇವರುಗಳ ವಿದ್ಯಾರ್ಥಿಗಳೋ ಸಂಗಡಿಗರೋ ಆಗಿದ್ದಾರೆ.		(ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ